ಭಟ್ಕಳ:೧೦, ಇತ್ತಿಚೆಗೆ ಭಟ್ಕಳ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಆರಾಧಾನ ಕೇಂದ್ರಗಳ ಮೇಲೆ ನಡೆಸಿದ್ದಾರೆನ್ನಲಾದ ದಾಳಿಯ ಹಿಂದೆ ಸಂಘ ಪರಿವಾರದ ಸ್ಪಷ್ಟ ಕೈವಾಡವಿರುದ್ದು ಅದನ್ನು ನ್ಯಾ. ಸೋಮಶೇಖರ್ ಆಯೋಗದ ಮಧ್ಯಂತರ ವರದಿಯಿಂದ ಹೊರಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೆ ಭಜರಂಗದಳ ಮತ್ತು ಶ್ರೀರಾಮ ಸೇನೆಯನ್ನು ನಿಷೇಧಿಸಬೇಕೆಂದು ನಾಗರೀಕ ಹಕ್ಕುಗಳ ಸಂರಕ್ಷಣಾ ಸಮಿತಿಯ(ಅಸೋಸಿಯೇಶನ್ ಫಾರ್ ಪ್ರೋಟೆಕ್ಷನ್ ಆಫ್ ಸಿವಿಲ್ ರೈಟ್ಸ್) ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಖಮರುದ್ದೀನ್ ಮಷಾಯಿಖ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇತ್ತಿಚೆಗೆ ಭಟ್ಕಳದಲ್ಲಿ ಶ್ರೀರಾಮ ಸೇನೆಯು ಕ್ರೈಸ್ತರ ಶಿಲುಭೆಯನ್ನು ದ್ವಂಸಗೊಳಿಸಿದ್ದರ ಹಿನ್ನೆಲೆಯಲ್ಲಿ ಮುಂಡಳ್ಳಿಯಲ್ಲಿನ ಚರ್ಚಗೆ ಭೇಟಿ ನೀಡಿ ಅಲ್ಲಿನ ಫಾದರ್ ರೋಷನ್ ಡಿ’ಸೋಜ ರೊಂದಿಗೆ ಮಾತುಕತೆ ನಡೆಸಿ ಘಟನೆಯನ್ನು ಖಂಡಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದುಷ್ಕರ್ಮಿಗಳು ಈಗ ಅಲ್ಪಸಂಖ್ಯತರನ್ನು ಗುರಿಮಾಡಿಕೊಂಡು ಅವರ ಧಾರ್ಮಿಕ ಕೇಂದ್ರ, ಶಾಲೆ, ಅನಾಥಾಲಯಗಳ ಮೇಲೆ ದಾಳಿಯನ್ನು ಮಾಡುತ್ತಿರುವುದು ಇಲ್ಲಿನ ಹಿಂದು ಮುಸ್ಲಿಮರ ಸೌಹಾರ್ಧತೆಯಲ್ಲಿ ಹುಳಿಯನ್ನು ಹಿಂಡುವ ಕೆಲಸವನ್ನು ಮಾಡುವಂತಹದ್ದಾಗಿದೆ. ನಮ್ಮ ದೇಶದ ಸಂವಿಧಾನವು ಇಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಅವನದೇ ಆದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ತನ್ನ ಧರ್ಮವನ್ನು ಆಚರಿಸುವ ಅದನ್ನು ಪ್ರಚುರ ಪಡಿಸುವ ಹಕ್ಕು ಸಂವಿಧಾನ ಬದ್ಧವಾದುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮೌಲಾನ ಸೈಯದ್ ಝುಬೇರ್, ಸಾದಾ ಮೀರಾ, ಸೈಯ್ಯದ್ ಅಶ್ರಫ್ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು.